Sunday, 24 February 2013

ನೆನಪಿನಲ್ಲೇ ಸನಿಹ...


ನೆನಪಿನಲ್ಲೇ ಸನಿಹ...

ಮರುಭೂಮಿಯಲ್ಲಿ ಚಿಗುರೊಡೆದು, ಮಲೆನಾಡಿನಲ್ಲಿ ಬೆಳೆದು, ಎಲ್ಲೆಡೆಯೂ ತನ್ನ ಬೇರನ್ನು ಚಾಚಿ, ತನ್ನೆಡೆಗೆ ಬಂದ ಸರ್ವರಿಗೂ ಆಶ್ರಯ ನೀಡಿದ ಓ ನನ್ನ ಪ್ರೀತಿಯ ಕಲ್ಪವೃಕ್ಷವೇ ನಿನಗೆ ಕೋಟಿ ಕೋಟಿ ನಮನ...

ಈ ನನ್ನ ಕಲ್ಪವೃಕ್ಷವ ನಾ ಕಂಡದ್ದು ನಾ ಈ ಕಲ್ಪವೃಕ್ಷದ ಕುಡಿಯಾಗಿ ಚಿಗುರಿದಾಗ...

ಮರುಭೂಮಿಯಲ್ಲಿ ಜನಿಸಿದ ಈ ಕಲ್ಪವೃಕ್ಷ ಬೇರಾರೂ ಅಲ್ಲಾ... ನನ್ನ ಪ್ರೀತಿಯ ಅಪ್ಪ...

ಬಳ್ಳಾರಿಯಲ್ಲಿ ಸಮೃದ್ಧಿಯ ಸಿರಿಯಲ್ಲಿ ಜನಿಸಿದ ಕಲ್ಪವೃಕ್ಷ ತನ್ನ ಬಾಲ್ಯದಲ್ಲಿಯೇ ಬಿರುಗಾಳಿಗೆ ಸಿಲುಕಿ ಸಮೃದ್ಧಿಯ ಸಿರಿಯನ್ನು ಕಳೆದುಕೊಂಡು ಮರುಭೂಮಿಯಲ್ಲಿ ಮತ್ತೆ ಚಿಗುರಲು ತುಂತುರು ಮಳೆಗಾಗಿ ಹವಣಿಸುತ್ತಿತ್ತು.

ಪುಟ್ಟ ಜೀವ ತನ್ನ ಕಾಲ ಮೇಲೆ ತಾನು ನಿಲ್ಲಬೇಕೆಂಬ ಛಲದಿಂದ ಪರರ ಆಶ್ರಯದಲ್ಲಿ ಬಿಸಿಲ ಬೇಗೆಯನ್ನು ಸಹಿಸಿಕೊಂಡು ಯಾರೂ ಕದಿಯಲಾಗದ ಅಮೂಲ್ಯವಾದ ವಿದ್ಯೆ ಎಂಬ ಸಿರಿಯನ್ನು ಸಂಪಾದಿಸಿ ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿತ್ತು.

ಆಗಿನ ಮದ್ರಾಸಿನ ಮೆಟ್ರಿಕ್ಯುಲೇಷನ್ ಮುಗಿಸಿ ಸ್ವಾವಲಂಬಿಯಾಗಲು  ಮಲೆನಾಡಿನ ಸಿಹಿಮೊಗೆಯಾದ ಶಿವಮೊಗ್ಗದೆಡೆಗೆ ಸಾಗಿತು... ಕೇವಲ 30 ರೂಪಾಯಿಗೆ ಸಕ್ಕರೆ ಕಾರ್ಖಾನೆಯೊಂದರಲ್ಲಿ ಕೆಲಸ ಪಡೆದು ಮರುಭೂಮಿಯಲ್ಲಿರುವ ತನ್ನವರಿಗೆ ತುಂತುರು ಮಳೆಯ ಸುರಿಸಿತ್ತು...

ಪ್ರತಿನಿತ್ಯವೂ 12 ಕಿ.ಮೀ. ನೆಡೆದು ವರ್ಷದ 365  ದಿನವೂ ಶ್ರಮಿಸಿ ಮೆಚ್ಚುಗೆಗೆ ಪಾತ್ರವಾಗಿ ಮಲೆನಾಡಿನಲ್ಲಿ ತನ್ನ ಸಂಸಾರವ ಬೆಳೆಸಿತು.  ತನ್ನೆಡೆಗೆ ಬಂದ ಪ್ರತಿಯೊಬ್ಬರಿಗೂ ಸಹಾ ಸಹಾಯ ಹಸ್ತ ನೀಡಿ, ಅನೇಕ ಸಂಸಾರಕ್ಕೆ ನೆರಳನ್ನು ನೀಡಿದ ಈ ಕಲ್ಪವೃಕ್ಷ ಎಲ್ಲರ ಪಾಲಿಗೆ ಕಲ್ಪವೃಕ್ಷವೇ ಆಗಿತ್ತು.

ಕೇವಲ 30 ರೂಪಾಯಿಗೆ ಕೆಲಸಕ್ಕೆ ಸೇರಿದ ಈ ವೃಕ್ಷ ಮ್ಯಾನೇಜರ್ ಆಗಿ ಕಂಪನಿಯ ಆರ್ಥಿಕ ವ್ಯವಹಾರವನ್ನು ನಿಷ್ಠೆಯಿಂದ ನಿರ್ವಹಿಸಿ ಮೆಚ್ಚುಗೆಯನ್ನು ಪಡೆದಿತ್ತು. ತಾನು ಮರುಭೂಮಿಯಲ್ಲಿ ಬೆಳೆದರೂ ನಮ್ಮನ್ನು ತನ್ನ ನೆರಳಿನಲ್ಲಿಯೇ ಪೋಷಿಸಿತು.

ಮಲೆನಾಡಿನ ಸಿರಿಯಲ್ಲಿ ಸುಖವಾಗಿದ್ದ ಜೀವಕ್ಕೆ ಆಘಾತವೊಂದು ಕಾದಿತ್ತು... ಕಲ್ಪವೃಕ್ಷ ಸಿಡಿಲಿನ ಬಡಿತಕ್ಕೆ ಸಿಲುಕಿ ಮತ್ತೆ ಪರಿತಪಿಸುವಂತಾಯಿತು. ತಾನು ಕಾರ್ಯನಿರ್ವಹಿಸುತ್ತಿದ್ದ ಸಕ್ಕರೆ ಕಾರ್ಖಾನೆ ಇದ್ದಕ್ಕಿದ್ದಂತೆ ನಿಂತು ಹೋಯಿತು. ಈ ಸಿಡಿಲಿನ ತಾಪ ತಡೆಯಲಾಗದೆ ಕಲ್ಪವೃಕ್ಷ ಪ್ರತಿ ಕ್ಷಣವೂ ಚಿಂತೆಯಿಂದ ಬಾಡತೊಡಗಿತು...

ಶನಿವಾರ, ಜನವರಿ 26, 2013 ರಂದು ಬೆಳಗ್ಗೆ 4:30ಕ್ಕೆ ನನ್ನ ಕಲ್ಪವೃಕ್ಷ ಚಿರನಿದ್ರೆಯಲ್ಲಿ ಸಾಗಿತ್ತು... ಅಂದು ನಾ ಕಂಡದ್ದು ನನ್ನ ಕಲ್ಪವೃಕ್ಷ ಸಂಪಾದಿಸಿದ ಬೆಲೆಕಟ್ಟಲಾಗದ ಆಸ್ತಿಯನ್ನು. ಅದು ಪ್ರತಿಯೊಬ್ಬರು ಹೇಳಿದ ಮಾತು... "ನಿಷ್ಠಾವಂತ, ಸಹಾಯ ಹಸ್ತವ ನೀಡಿ, ಪ್ರೀತಿ ವಿಶ್ವಾಸದಿಂದ ಅನೇಕ ಕುಟುಂಬದ ನೆಲೆಗೆ ಕಾರಣರಾದ ಮಹಾನ್ ಪುರುಷ" ಎಂಬ ಕೊಟಿ ಕೊಟ್ಟರೂ ಸಿಗದ ಪ್ರೀತಿಯ ಹೆಗ್ಗಳಿಕೆಯ ಮಾತು...

ಮೌನವಾಗಿ ಸರ್ವರ ಮನದಲ್ಲಿಯೂ ಹಸಿರಾಗಿರುವ ಈ ಕಲ್ಪವೃಕ್ಷ ಈಗ ಸನಿಹವಾಗಿರುವುದು ನೆನಪಿನಲ್ಲಿ ಮಾತ್ರ...

ದೇವರು ನಮ್ಮ ಪಾಲಿಗೆ ಕರುಣಿಸಿದ ಈ ಕಲ್ಪವೃಕ್ಷವೇ ನಮ್ಮ ಬಾಳಿನ ಆಸ್ತಿ...

ಓ ಕಲ್ಪವೃಕ್ಷವೇ ನೀ ನನ್ನ ಮನದಾಳದಲ್ಲಿ ಹಸಿರಾಗಿ ನನ್ನ ಹೃದಯದ ಬಡಿತವಾಗಿ ನನ್ನ ಬಾಳಿನಲಿ ಸದಾ ಚಿರಂತವಾಗಿರುವೆ...

ತನ್ನ ತನವನ್ನು ತೊರೆದು ಸರ್ವಸ್ವವನ್ನೂ ಪರರಿಗೆ ಧಾರೆಯೆರೆದ ನನ್ನ ಈ ಕಲ್ಪವೃಕ್ಷ ಸದಾ ಅಮರ...